Udayavani Entertainment 
Udayavani : Karnataka Most Honored Indian Newspaper Published From South India

 •   ಬೆಳ್ಳಿ: ಇನ್ನಷ್ಟು ಕಾಸಿದ್ದರೆ ಬಂಗಾರವಾಗಬಹುದಿತ್ತು
  ಅವನು ಬೀದಿಬೀದಿ ತಿರುಗೋ ಹುಚ್ಚ. ಅವನನ್ನ ಕಂಡರೆ ದೇವಸ್ಥಾನದ ಪೂಜಾರಿಗೆ ವಿಶೇಷ ಮಮತೆ. ಅವನಿಗಾಗಿ ಕಾದಿದ್ದು ಊಟ ಹಾಕುತ್ತಾನೆ. ಅವನನ್ನು ಪ್ರೀತಿಯಿಂದ ಮಾತಾಡಿಸುತ್ತಾನೆ. ಅದನ್ನ ನೋಡಿ ಅವಳಿಗೆ ಆಶ್ಚರ್ಯವಾಗುತ್ತದೆ. ಅದ್ಯಾಕೆ ಆ ಹುಚ್ಚನಿಗೆ ವಿಶೇಷ ಮರ್ಯಾದೆ ಎಂದು ಕೇಳುತ್ತಾಳೆ. ಅದ್ಯಾಕೆ ಅವನ ಮೇಲೆ ಪ್ರೀತಿ ಎಂದು ಪೂಜಾರಿಯನ್ನು ನಿಲ್ಲಿಸಿಕೊಂಡು ಕೇಳುತ್ತಾಳೆ. ಅಲ್ಲಿಂದ ಬೆಳ್ಳಿ ಫ್ಲಾಶ್‌ಬ್ಯಾಕ್‌ ಶುರು. ಬಸವರಾಜ್‌ ಅಲಿಯಾಸ್‌ ಬೆಳ್ಳಿ ಒಂದು ಕಾಲದ ಬೆಂಗಳೂರಿನ ಡಾನ್‌. ಅವನದು ಐದು ಜನರ ತಂಡ. ಸ್ನೇಹಿತರ ಜೊತೆಗೆ ಅಷ್ಟೇ ಸಂಖ್ಯೆಯ ದುಶ್ಮನ್‌ಗಳೂ ಅವನೆದುರು ಇದ್ದಾರೆ. ಐವರಲ್ಲಿ ಇಬ್ಬರನ್ನೆತ್ತಬೇಕು ಎನ್ನುವುಷ್ಟರಲ್ಲಿ ಹುಡುಗಿಯ ಪರಿಚಯವಾಗುತ್ತದೆ. ಆ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಆ ಪ್ರೇಮ ಮದುವೆಯಲ್ಲಿ ಮುಗಿಯಬೇಕು ಎನ್ನುವಷ್ಟರಲ್ಲಿ ಉಳಿದ ಮೂವರು ರೌಡಿಗಳು, ಬೆಳ್ಳಿ ಅಂಡ್‌ ಗ್ಯಾಂಗ್‌ ಮೇಲೆ ಬೀಳುತ್ತಾರೆ. ಈ ಗ್ಯಾಂಗ್‌ ವಾರ್‌ನಲ್ಲಿ ಬೆಳ್ಳಿಗೆ ಏಟು ಬಿದ್ದು ಹುಚ್ಚನಾಗುತ್ತಾನೆ, ಅವನ ಉಳಿದ ನಾಲ್ವರು ಸ್ನೇಹಿತರು ಊರು ಬಿಡುತ್ತಾರೆ... ಕಥೆ ಇಷ್ಟು ಸಾಕು. ಇಲ್ಲಿಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಬೆಳ್ಳಿ ಸರಿ ಹೋಗುತ್ತಾನಾ? ಅವನ ಸ್ನೇಹಿತರು ವಾಪಸ್ಸು ಬಂದು ಸೇರಿಕೊಳ್ಳುತ್ತಾರಾ? ಸ್ನೇಹಳೊಂದಿಗೆ ಬೆಳ್ಳಿಯ ಮದುವೆಯಾಗುತ್ತದಾ? ಉಳಿದ ಮೂವರು ವಿಲನ್‌ಗಳನ್ನು ಬೆಳ್ಳಿ ಮಟ್ಟ ಹಾಕುತ್ತಾನಾ? ಬೆಳ್ಳಿಯ ಜೀವನಕ್ಕೆ ನ್ಯಾಯ, ಅರ್ಥ ಸಿಗುತ್ತದಾ?... ಹೀಗೆ ಹಲವು ಪ್ರಶ್ನೆಗಳಿಗೆ ಚಿತ್ರದ ವಿವಿಧ ಹಂತದಲ್ಲಿ ಉತ್ತರಗಳು ಸಿಗುತ್ತಾ ಹೋಗುತ್ತವೆ ಮತ್ತು ನೀವು ಆ ಉತ್ತರಗಳನ್ನು ಚಿತ್ರಮಂದಿರದಲ್ಲೇ ನೋಡಬೇಕು. 'ಬೆಳ್ಳಿ' ಹಲವು ಲೇಯರ್‌ಗಳ ಸಿನಿಮಾ. ಇದೊಂದು ರೌಡಿಸಂ ಸಿನಿಮಾ ಎಂದು ಮೇಲುನೋಟಕ್ಕೆ ಅನಿಸಿದರೂ, ಇಲ್ಲಿ ರೌಡಿಸಂ ಜೊತೆಗೆ ಪ್ರೇಮವಿದೆ, ಸ್ನೇಹವಿದೆ, ತ್ಯಾಗವಿದೆ, ತಾಯಿ ಸೆಂಟಿಮೆಂಟ್‌ ಇದೆ. ಹಾಗಾಗಿ ಇದಕ್ಕೆ ಬೇಕಾದರೆ ಆಲ್‌ ಇನ್‌ ಆಲ್‌ ಸಿನಿಮಾ ಎಂದು ಕರೆಯಬಹುದು. ಎಲ್ಲವೂ ಸ್ವಲ್ಪ ಓವರ್‌ಡೋಸ್‌ ಆಗಿಯೇ ಇದೆ. ಅವೆಲ್ಲಕ್ಕಿಂತ ಹೆಚ್ಚು ಓವರ್‌ಡೋಸ್‌ ಎನಿಸುವುದು ಚಿತ್ರದಲ್ಲಿರುವ ರಕ್ತಪಾತ. ಚಿತ್ರದಲ್ಲೊಂದು ದೃಶ್ಯವಿದೆ. ನಾಯಕ-ನಾಯಕಿ ಪಾರ್ಕ್‌ನಲ್ಲಿ ನಿಂತು ಭವಿಷ್ಯದ ಬಗ್ಗೆ ಮಾತಾಡುತ್ತಾರೆ. ಆ ಸಂದರ್ಭದಲ್ಲಿ ರೌಡಿಗಳು ಅವರನ್ನು ರೌಂಡ್‌-ಅಪ್‌ ಮಾಡುತ್ತಾರೆ. ಆ ನಂತರ ಒಂದೇ ಸಮನೆ ಅಟ್ಯಾಕ್‌ ಮಾಡುತ್ತಾರೆ. ಈ ದೃಶ್ಯ ಚಿತ್ರದ ಹೈಲೈಟ್‌ ಎಂದರೆ ತಪ್ಪಿಲ್ಲ. ಈ ಬಗ್ಗೆ ಖುಷಿಪಡುತ್ತಿರುವಾಗಲೇ, ತಕ್ಷಣ ದೊಡ್ಡದೊಂದು ಯುದ್ಧವಾಗಿ, ರಕ್ತಪಾತ ಶುರುವಾಗಿ, ಪರದೆಯೆಲ್ಲಾ ರಕ್ತವಾಗಿ ಎಲ್ಲವನ್ನೂ ಮರೆಯುವಂತೆ ಆಗಿಬಿಡುತ್ತದೆ. ಬಹುಶಃ ಚಿತ್ರಕಥೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ, ಈ ತರಹ ಸಾಕಷ್ಟು ಕಡೆ ಆಗುತ್ತದೆ. ಚಿತ್ರದ ರೀ-ರೆಕಾರ್ಡಿಂಗ್‌ ಚೆನ್ನಾಗಿದೆ ಎಂದುಕೊಳ್ಳುವಷ್ಟರಲ್ಲೇ 'ಗಾಡ್‌ಫಾದರ್‌'ನ ಹಿನ್ನೆಲೆ ಸಂಗೀತವನ್ನು ಯಥಾವತ್ತಾಗಿ ಬಳಸಿಕೊಂಡಿದ್ದು ಗೊತ್ತಾಗುತ್ತದೆ. ನಾಯಕನ ಬಿಲ್ಡಪ್‌ ಸಖತ್ತಾಗಿದೆ ಎನ್ನುವಷ್ಟರಲ್ಲೇ 'ಜೋಗಯ್ಯ'ದ ಹಿನ್ನೆಲೆ ಧ್ವನಿ ಕದ್ದಿದ್ದು ಗೊತ್ತಾಗಿ ಬೇಸರವಾಗುತ್ತದೆ. ಇನ್ನು ತಾಯಿ ಸೆಂಟಿಮೆಂಟ್‌, ಮಲೆಮಹದೇಶ್ವರ ಬೆಟ್ಟದ ಮೇಲಿನ ಹಾಡು ಎಲ್ಲವೂ 'ಜೋಗಿ' ಚಿತ್ರವನ್ನು ನೆನಪಿಸುತ್ತದೆ. ಇದೆಲ್ಲವನ್ನು ಬಿಟ್ಟು ನೋಡಿದರೆ, ಚಿತ್ರಕಥೆ ವಿಷಯದಲ್ಲಿ ಖುಷಿಯಾಗುತ್ತದೆ. ಸರಳವಾಗಿ ಹೇಳಬಹುದಾಗಿದ್ದ ಒಂದು ಕಥೆಯನ್ನು ಮಹೇಶ್‌ ಬ್ರೇಕ್‌ ಮಾಡಿ, ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆಯವರಿಂದ ಹೇಳಿಸುತ್ತಾ ಹೋಗುತ್ತಾರೆ. ಬೆಳ್ಳಿ ಅಂತ ಒಬ್ಬ ರೌಡಿ ಇದ್ದ ಎಂದು ಒಬ್ಬ ಸ್ನೇಹಿತ ನೆನಪಿಸಿಕೊಂಡರೆ, ಇನ್ನೊಬ್ಬ ಅವನ ಉತ್ತುಂಗದ ದಿನಗಳನ್ನು ಹೇಳುತ್ತಾನೆ, ಮತ್ತೂಬ್ಬ ಅವನ ಫ್ಲಾಶ್‌ಬ್ಯಾಕ್‌ ನೆನಪಿಸಿಕೊಳ್ಳುತ್ತಾನೆ. ಹೀಗೆ ಇಡೀ ಚಿತ್ರ ಎಪಿಸೋಡಿಕ್‌ ಆಗಿ ಮೂಡಬಂದರೂ, ಎಲ್ಲೂ ಟ್ರಾಕ್‌ ಬಿಡುವುದಿಲ್ಲ, ಒಟ್ಟಾರೆ ಚೌಕಟ್ಟನ್ನು ಬಿಟ್ಟು ಹೊರಹೋಗುವುದಿಲ್ಲ. ಆ ಮಟ್ಟಿಗೆ ನಿರ್ದೇಶಕ 'ಮುಸ್ಸಂಜೆ' ಮಹೇಶ್‌, ಇದುವರೆಗಿನ ಚಿತ್ರಗಳಿಗಿಂಥ ಬೇರೆಯದೇ ರೀತಿಯ ಹೊಸ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಾರೆ ಮತ್ತು ಅದರಲ್ಲಿ ಬಾಗಶಃ ಗೆಲ್ಲುತ್ತಾರೆ. ಇನ್ನು ಮಹೇಶ್‌ರ ಈ ಕಥೆಗೆ ಜೀವ ಕೊಡುವುದು ಶಿವರಾಜ್‌ಕುಮಾರ್‌. ಹುಚ್ಚನಾಗುವ ಮುನ್ನ ಮತ್ತು ನಂತರ... ಹೀಗೆ ಎರಡು ಶೇಡ್‌ಗಳಲ್ಲಿ ಶಿವರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಾರೆ ಮತ್ತು ಎರಡರಲ್ಲೂ ಶಿವರಾಜ್‌ಕುಮಾರ್‌ ಮಿಂಚುತ್ತಾರೆ. ಅವರ ಎನರ್ಜಿ, ಟೈಮಿಂಗ್‌ ಎಲ್ಲವೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಇನ್ನು ವಿನೋದ್‌ ಪ್ರಭಾಕರ್‌, 'ಒರಟ' ಪ್ರಶಾಂತ್‌, 'ಶಿಷ್ಯ' ದೀಪಕ್‌ ಮತ್ತು ವೆಂಕಟೇಶ್‌ ಪ್ರಸಾದ್‌ಗೆ ಸಮಾನ ಅವಕಾಶ ನೀಡಲಾಗಿದೆ. ಆ ಅವಕಾಶದಲ್ಲಿ ಯಾರೂ ಹೆಚ್ಚು ಮಾಡುವುದಕ್ಕೆ ಪ್ರಯತ್ನಿಸಿಲ್ಲ. ಕೃತಿ ಖರಬಂದ ತಮ್ಮ ಸರಳತೆಯಿಂದ ಇಷ್ಟವಾಗುತ್ತಾರೆ. ಸುಧಾರಾಣಿ ಅವರಿಗೆ ದೊಡ್ಡ ಪಾತ್ರವಿದೆ ಮತ್ತು ಅವರು ನಟನೆ ಬಗ್ಗೆ ಚಕಾರ ಎತ್ತುವ ಹಾಗಿಲ್ಲ. ಇನ್ನು ಚಿತ್ರದಲ್ಲಿ ಸಾಕಷ್ಟು ವಿಲನ್‌ಗಳಿದ್ದಾರೆ. ಅವರೆಲ್ಲಾ ಬಂದು ಹೋಗುತ್ತಾರೆ ಅಷ್ಟೇ. ಛಾಯಾಗ್ರಹಣ ಹೇಗಿದೆ ಎನ್ನುವುದಕ್ಕಿಂತ, ಅಷ್ಟೊಂದು ಶಾಟ್‌ಗಳನ್ನು ತೆಗೆಯುವ ಶಕ್ತಿ ಚಂದ್ರಶೇಖರ್‌ ಅವರಿಗೆ ಎನ್ನುವುದೇ ಖುಷಿ. ಅಷ್ಟೊಂದು ಪುಟ್ಟ ಪುಟ್ಟ ಶಾಟ್‌ ಮತ್ತು ದೃಶ್ಯಗಳು ಚಿತ್ರದಲ್ಲಿವೆ. ಅವನ್ನೆಲ್ಲಾ ಸಂಕಲನಕಾರ ದೀಪು ಎಸ್‌. ಕುಮಾರ್‌ ಬಹಳ ಅಚ್ಚುಕಟ್ಟಾಗಿಯೇ ಜೋಡಿಸಿದ್ದಾರೆ. ಇನ್ನು ಶ್ರೀಧರ್‌ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳನ್ನು ಕೇಳಬಹುದು. ಚಿತ್ರ: ಬೆಳ್ಳಿ ನಿರ್ಮಾಣ: ರಾಜೇಶ್‌ ನಿರ್ದೇಶನ: 'ಮುಸ್ಸಂಜೆ' ಮಹೇಶ್‌ ತಾರಾಗಣ: ಶಿವರಾಜ್‌ಕುಮಾರ್‌, ಕೃತಿ ಖರಬಂದ, ವಿನೋದ್‌ ಪ್ರಭಾಕರ್‌, ದೀಪಕ್‌, ಪ್ರಶಾಂತ್‌, ವೆಂಕಟೇಶ್‌ ಪ್ರಸಾದ್‌, ಪದ್ಮಾವಾಸಂತಿ, ಆದಿಲೋಕೇಶ್‌ ಮತ್ತಿತರರು. ಧಿಚೇತನ್‌ ನಾಡಿಗೇರ್‌

  » Read more..

 •   ಕಪಾಲಿಯಲ್ಲಿ ಬೆಳ್ಳಿ ಹಬ್ಬ
  ಕೃತಕ ಲಾಂಗ್‌ ಹಿಡಿದು ಕುಣಿದಾಡಿದ ಅಭಿಮಾನಿಗಳು ಶಿವರಾಜ್‌ಕುಮಾರ್‌ ಅಭಿನಯದ 'ಬೆಳ್ಳಿ' ಚಿತ್ರಕ್ಕೆ ಒಳ್ಳೆಯ ಓಪನಿಂಗ್‌ ಸಿಕ್ಕಿದೆ, ಕಲೆಕ್ಷನ್‌ ಚೆನ್ನಾಗಿದೆ, ಕೆಲವು ಕಡೆ ಮಧ್ಯ ರಾತ್ರಿಯೇ ಚಿತ್ರ ಬಿಡುಗಡೆಯಾಗಿದೆ, ಇನ್ನೂ ಕೆಲವು ಕಡೆ ಬೆಳಿಗ್ಗೆ 8 ಗಂಟೆಗೆಲ್ಲಾ ಪ್ರದರ್ಶನ ಶುರುವಾಗಿದೆ ಎಂಬೆಲ್ಲಾ ವಿಷಯಗಳು ಹಳತಾಗಿವೆ. ಹೊಸ ವಿಷಯ ಏನಪ್ಪಾ ಅಂದರೆ, ಚಿತ್ರಕ್ಕೆ ಜನ ತೋರಿಸಿದ ಪ್ರತಿಕ್ರಿಯೆ. ಅದರಲ್ಲೂ ಕಪಾಲಿ ಚಿತ್ರಮಂದಿರದಲ್ಲಿ ಜನ ಚಿತ್ರಕ್ಕೆ ತೋರಿಸಿದ ಪ್ರತಿಕ್ರಿಯೆ ಮಾತ್ರ ವಿಶೇಷವಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಶಿವರಾಜ್‌ಕುಮಾರ್‌ ಅಭಿಮಾನಿಗಳು, ಹಾಡುಗಳು ಬಂದ ಸಂದರ್ಭದಲ್ಲಿ ಪರದೆಯ ಬಳಿ ಬಂದು ಕುಣಿದು ಕುಪ್ಪಳಿಸಿದರು. ಕಲರ್‌ ಕ್ರಾಕರ್, ಹೂವು ಎಸೆದು ಸಂಭ್ರಮಿಸಿದರು. ಶಿವರಾಜ್‌ಕುಮಾರ್‌ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಾಗ, ಆರತಿ ಬೆಳಗಿದರು. ಹಾಡು ಮತ್ತು ಫೈಟುಗಳು ಬಂದ ಸಂದರ್ಭದಲ್ಲಿ ಕೃತಕ ಲಾಂಗ್‌ ಹಿಡಿದು ಕುಣಿದು ಸಂಭ್ರಮಿಸಿದರು. ಚಿತ್ರಮಂದಿರದ ಹೊರಗೂ ಸಂಭ್ರಮ: ಇದು ಚಿತ್ರಮಂದಿರದ ಒಳಗಿನ ಕಥೆಯಾದರೆ, ಚಿತ್ರಮಂದಿರದ ಹೊರಗೂ ಸಂಭ್ರಮ ಮನೆಮಾಡಿತು. ಕಪಾಲಿ ಚಿತ್ರಮಂದಿರದ ಎದುರು ಶಿವರಾಜ್‌ಕುಮಾರ್‌ ಅವರ ಬೃಹದಾಕಾರದ ಕಟೌಟ್‌ ನಿಲ್ಲಿಸಲಾಗಿತ್ತು. ಅದರ ಜೊತೆಗೆ ವೆಂಕಟೇಶ್ವರ ಮೂರ್ತಿಯನ್ನು ಸಹ ಪ್ರತಿಷ್ಠಾಪಿಸಲಾಗಿತ್ತು. ಅಭಿಮಾನಿಗಳು ಆ ಮೂರ್ತಿಗೆ ಪೂಜೆ ಸಲ್ಲಿಸಿ, ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥಿಸಿದರು. ಸಂಭ್ರಮ ನೋಡಿ ಬಂದ ವಿದೇಶಿಗರು: ವಿಶೇಷವೆಂದರೆ, ಅಭಿಮಾನಿಗಳ ಈ ಸಂಭ್ರಮ ನೋಡಿ, ವಿದೇಶಿ ಪ್ರವಾಸಿಗರು ಚಿತ್ರ ನೋಡಲು ಬಂದಿದ್ದು. ಗಾಂಧಿನಗರದ ಮುಖ್ಯ ರಸ್ತೆಯಲ್ಲಿ ವಿದೇಶಿಗರು ಕಾಣಸಿಗುವುದು ಹೊಸ ವಿಷಯವೇನಲ್ಲ. ಯೂರೋಪ್‌ನಿಂದ ಬೆಂಗಳೂರಿನ ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದೇಶಿಗರು, ಬೆಳಿಗ್ಗೆ ಗಾಂಧಿನಗರದ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ, ಕಪಾಲಿ ಚಿತ್ರಮಂದಿರದ ಎದುರು ಶಿವರಾಜ್‌ಕುಮಾರ್‌ ಅವರ ಕಟೌಟ್‌ ಮತ್ತು ಅಭಿಮಾನಿಗಳ ಸಂಭ್ರಮ ಕಂಡು, ಚಿತ್ರ ನೋಡುವ ಕುತೂಹಲ ಉಂಟಾಗಿ ಚಿತ್ರಮಂದಿರಕ್ಕೆ ಬಂದಿದ್ದರು.

  » Read more..

 •   ನಮಸ್ತೆ ಮೇಡಂ ತಂಡ ಉದಯವಾಣಿ ಕಚೇರಿಯಲ್ಲಿ
  2ನೇ ವಾರಕ್ಕೆ ಕಾಲಿಟ್ಟು, ಯಶಸ್ವಿ ಪ್ರದರ್ಶಿತವಾಗುತ್ತಿರುವ 'ನಮಸ್ತೆ ಮೇಡಂ' ಚಿತ್ರತಂಡ ಚಿತ್ರದ ಯಶಸ್ಸಿನ ಖುಷಿಯನ್ನು ಗುರುವಾರ 'ಉದಯವಾಣಿ' ಕಚೇರಿಯಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿತು. ನಿರ್ದೇಶಕ ರಘುರಾಜ್‌, ನಾಯಕ ಕಿಟ್ಟಿ, ನಾಯಕಿ ರಾಗಿಣಿ, ಕಾರ್ಯಕಾರಿ ನಿರ್ಮಾಪಕ ಶಿವು, 'ಉದಯವಾಣಿ' ಸಮೂಹ ಸಂಪಾದಕ ರವಿಹೆಗಡೆ, ರಾಷ್ಟ್ರೀಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ದೇಸಿಕನ್‌, ಜಾಹೀರಾತು ವಿಭಾಗದ ರಾಘವೇಂದ್ರ ಇದ್ದರು.

  » Read more..

 •   ಹೊಸಪೇಟೆ ಬಳ್ಳಾರಿ: ನಸುಕಿನ ಜಾವ 2.30ಕ್ಕೇ ಬೆಳ್ಳಿ ಚಿತ್ರ ಪ್ರದರ್ಶನ
  ಬೆಂಗಳೂರು: ಶಿವರಾಜ್‌ಕುಮಾರ್‌ ಅಭಿನಯದ 'ಬೆಳ್ಳಿ' ಚಲನಚಿತ್ರ ರಾಜ್ಯಾದ್ಯಂತ 220 ಸಿನಿಮಾ ಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ ಹೊಸಪೇಟೆ, ದಾವಣಗೆರೆ, ಬಳ್ಳಾರಿಯಲ್ಲಿ ಮಧ್ಯರಾತ್ರಿ 2.30ಕ್ಕೇ ಪ್ರದರ್ಶನ ಆರಂಭವಾಗಲಿದೆ. ಈ ಚಿತ್ರಮಂದಿರಗಳಲ್ಲಿ ಆರು ಶೋ ನಡೆಸಲಾಗುತ್ತದೆ. ಬೆಂಗಳೂರಿನ ಕಾರ್ನಿವಾಲ್‌ ಚಿತ್ರಮಂದಿರದಲ್ಲಿ ಬೆಳಗ್ಗೆ 8 ಗಂಟೆಗೆ ಮೊದಲ ಪ್ರದರ್ಶನ ನಡೆಯಲಿದೆ. ಅದಲ್ಲದೇ ದೇವನಹಳ್ಳಿ, ದೊಡ್ಡಬಳ್ಳಾಪುರ ಮುಂತಾದೆಡೆ ಕೂಡ ಬೆಳಗ್ಗೆ 8 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ ಎಂದು ಚಿತ್ರ ನಿರ್ದೇಶಕ ಮುಸ್ಸಂಜೆ ಮಹೇಶ್‌ 'ಉದಯವಾಣಿ'ಗೆ ತಿಳಿಸಿದ್ದಾರೆ. ಈಗಾಗಲೇ ಮೊದಲ ದಿನದ 4 ಪ್ರದರ್ಶನದ ಟಿಕೆಟ್‌ ಸೋಲ್ಡ್‌ ಔಟ್‌ ಆಗಿವೆ ಎಂದು ಅವರು ಹೇಳಿದರು. ಶಿವರಾಜ್‌ ಕುಮಾರ್‌ ಜತೆ ಈ ಚಿತ್ರದಲ್ಲಿ ಕೃತಿ ಕರಬಂಧ, ವಿನೋದ ಪ್ರಭಾಕರ್‌, ಶಿಷ್ಯ ದೀಪಕ್‌, ಒರಟ ಪ್ರಶಾಂತ್‌, ಆದಿ ಲೋಕೇಶ್‌ ನಟಿಸಿದ್ದಾರೆ. ರಾಜೇಶ್‌ ನಿರ್ಮಾಣ, ಶ್ರೀಧರ್‌ ಸಂಗೀತ ಸಂಯೋಜಿಸಿದ್ದಾರೆ.

  » Read more..

 •   ನಿರ್ದೇಶಕ ನಾರಾಯಣ್‌ ಮಗಳು ವಿದ್ಯಾಶ್ರೀ ನಿಶ್ಚಿತಾರ್ಥ
  ನಿರ್ಮಾಪಕ, ನಿರ್ದೇಶಕ ಎಸ್‌. ನಾರಾಯಣ್‌ ಪುತ್ರಿ ವಿದ್ಯಾಶ್ರೀ ಅವರ ನಿಶ್ಚಿತಾರ್ಥ ಶ್ರೀನಿವಾಸ್‌ ಅವರೊಂದಿಗೆ ಗುರುವಾರ ನಡೆಯಿತು. ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ಅಂಬರೀಶ್‌ ದಂಪತಿ ಸೇರಿದಂತೆ ಚಿತ್ರರಂಗದ ಅನೇಕರು ಪಾಲ್ಗೊಂಡು ನವಜೋಡಿಗೆ ಶುಭಹಾರೈಸಿದರು.

  » Read more..